Feeds:
Posts
Comments
The DUO at Anekad (click on the pic for picasa link) photo courtesy: Ram Prashanth

ಮನೆ ಮುಟ್ಟಿದಾಗ ರಾತ್ರಿ ೯ ಗಂಟೆ. ನನ್ನ ಬರುವನ್ನೆ ಎದುರು ನೋಡುತ್ತಿದ್ದ, ನನ್ನ ಸಾಹಸದ ಕತೆ ಕೇಳಲು ಉತ್ಸುಕರಾಗಿದ್ದ ಅಪ್ಪ, ಅಮ್ಮ, ಅಣ್ಣ ಹಾಗು ಅತ್ತಿಗೆಯೊಂದಿಗೆ ಎರಡ್ಡೆರಡು ಮಾತಾನಾಡಿ, ಚಿಕ್ಕಪ್ಪನ ಎದುರು ನೋಡುತ್ತಾ ನಿದ್ರಾ ಸಮಯವಾಗಿದ್ದರೂ ನಿದ್ರಿಸದೆ ಎಚ್ಚರದಿಂದಿದ್ದ ಅಣ್ಣನ ಮಗ ೨ ವರೆ ವರ್ಷದ ಸುಧನ್ವನನ್ನ ಮುದ್ದು ಮಾಡಿ, ಶುಚಿಯಾಗಿ, ೪ ದಿನಕ್ಕಾಗುವಷ್ಟು ತಿಂದಿದ್ದರೂ ೪ ದಿನಗಳಿಂದ ಉಪವಾಸವಿದ್ದವನ ಹಾಗೆ ತಿಂದು, (ರಾತ್ರಿ ಸ್ವಲ್ಪ ಕಡಿಮೆ ಉಣಬೇಕೆಂಬ ಆಯುರ್ವೇದ ಶಾಸ್ತ್ರವನ್ನ ಮೂಲೆಗೆಸೆದು) ಇನ್ನೂ ೪ ದಿವಸಗಳಿಗಾಗುವಷ್ಟು ಉಂಡು, ೩ ರಗ್ಗು ಹೊದ್ದು ಮಲಗಿದವನಿಗೆ ಗಡದ್ದು ನಿದ್ದೆ. ಬೆಳಗ್ಗೆ ಎದ್ದಾಗ ಉದ್ದಿನ ದೋಸೆ ತಯ್ಯಾರ್. ಹೋಟೆಲ್ ಗಳಲ್ಲಿ ಕೊಡುವ ಮಸಾಲೆ ದೋಸೆ ಗಾತ್ರದ ೧೦ ದೋಸೆಗಳನ್ನ ಒಳಗಿಳಿಸಿ, ಅದನ್ನ ಕರಗಿಸಲು ಪುನಃ ನಿದ್ರೆ. ಅಪರಾಹ್ನ ಊಟ ಮಾಡಿ ಪುನಃ ಅದೇ…… ನಿದ್ರೆ. ಇದಕ್ಕೆಲ್ಲ ಕಾರಣ, ಹಿಂದಿನ ದಿನದ ನನ್ನ ಬೆಂಗಳೂರು ಟು ಮಡಿಕೇರಿ ಪ್ರಯಾಣ. ಪ್ರಯಾಣ ಎಲ್ಲರೂ ಮಾಡುವರು ಆದರೆ ಸೈಕಲ್ನಲ್ಲಿ ಪ್ರಯಾಣ ಮಾಡಿದರೆ ಹೀಗೆಲ್ಲ ಆಗುವುದುಂಟು ನೋಡಿ.

ಜ್ನಾನಿ ಭಾವ ದಶಂಬ್ರ ೩೦ಕ್ಕೆ ಬಹಳ ದಿನಗಳ ಕನಸಾದ ಬೆಂಗ್ಳೂರ್ – ಮಡಿಕೇರಿ ಸೈಕಲ್ ಸವಾರಿ ಮಾಡುವುದಾ!! ಅಂದಾಗ, ಖುಷಿಯಿಂದ ನಾನು ಹಾಗು ರಾಮ್ ಒಪ್ಪಿಕೊಂಡೆವು. ಆದರೆ ಕಾರಣಾಂತರಗಳಿಂದ ಭಾವ ಕೊನೆಯ ಕ್ಷಣಕ್ಕೆ ಹಿಂದೆ ಸರಿದದ್ದು ಬೇಸರವಾದರೂ, ನಾನು ಹಾಗು ನನ್ನ ಸಾಥಿ ರಾಮ್ ಪ್ರಶಾಂತ್ ಈ ಸಲ ಇದನ್ನ ಮಾಡಿಯೇ ತೀರಬೇಕೆಂದು ಪಣ ತೊಟ್ಟೆವು. ೨ ತಿಂಗಳಿನಿಂದ ಸೈಕಲ್ನಲ್ಲಿ ದೂರ ಪಯಣಿಸುವ ಅಭ್ಯಾಸ ತಪ್ಪಿ ಹೋಗಿದ್ದರೂ ಒಂದು ಕೈ ನೋಡಿಯೇ ಬಿಡುವ ನಿರ್ಧಾರಕ್ಕೆ ನಾನೂ ಬಂದೆ.

೧ ವಾರದಿಂದ ಮಂಗಳೂರಿನ ಮಾವನ ಮನೆಯಲ್ಲಿ ಸುಖವಾಗಿ ಮಡದಿಯೊಡನಿದ್ದ ನಾನು ನಿಗದಿತ ಡಿ ೩೦ಕ್ಕೆ ೨ ದಿನ ಮುಂಚಿತವಾಗಿ ಬೆಂಗ್ಳೂರಿಗೆ ಬಂದು ಸವಾರಿಗೆ ತಯ್ಯಾರಿ ಮಾಡಿಕೊಂಡೆ. ೩೦ಕ್ಕೆ ಮುಂಜಾವು ೪:೩೦ ಕ್ಕೆ ರಿಂಗ್ ರಸ್ತೆಯಲ್ಲಿ ಭೇಟ್ಟಿಯಾಗಿ  ಹೊರಡುವುದೆಂದು ತೀರ್ಮಾನಿಸಿದ್ದೆವು. ಯಾವತ್ತು ಹೇಳಿದ ಸಮಯಕ್ಕೆ ಮುಂಚಿತವಾಗಿಯೇ ತಲುಪುವ ನಾನು ಹೊರಡುವುದು ಸ್ವಲ್ಪ ತಡವಾಗಿ, ೪:೪೫ ಕ್ಕೆ ರಿಂಗ್ ರಸ್ತೆಯಿಂದ ಮಡಿಕೇರಿ ಕಡೆ ಪ್ರಯಾಣ ಬೆಳೆಸಿದೆವು. (ಒಂದು ವಿಚಾರದ ಬಗ್ಗೆ ನಾವು ಯೋಚಿಸಬೇಕಾಗಿದೆ. ಅಜಮಾಸು ೨೫೦ ಕಿ ಮೀ ಸೈಕಲ್ ಪ್ರಯಾಣ ಅಂದರೆ ಸುಮ್ಮನೆ ಮಾತಲ್ಲ. ಆದರೆ ಇದು ತಾಕತ್ತಿನ ಪ್ರಶ್ನೆಯೋ ಅಥವ ಮಾನಸಿಕವೊ? ನಾನು ಕಂಡುಕೊಂಡ ಸತ್ಯ ಅಂದರೆ, ಇದು ೭೦ ಪ್ರತಿಶತ ಮಾನಸಿಕ ಹಾಗು ಕೇವಲ ೩೦ ಪ್ರತಿಶತ ಮಾತ್ರ ನಮ್ಮ ದೇಹಸ್ಥಿತಿಯನ್ನ ಹೊಂದಿಕೊಂಡಿರುತ್ತದೆ ಎಂಬುದು)

ಬೆಳಗಿನ ಆಹ್ಲಾದಕರ ತಣ್ಣಗೆ ವೆದರ್ರು ನಮ್ಮ ಉತ್ಸಾಹವನ್ನು ಉತ್ತೇಜನಗೊಳಿಸಿ, ಸುಸ್ತನ್ನು ದೂರವಿಡಲು ಸಹಾಯಕಾರಿಯಾಗಿತ್ತು. ದಿನಾಲು ಸೈಕಲ್ ತುಳಿದು ಅಭ್ಯಾಸವಿದ್ದ ರಾಮನ ಹಿಂದೆ ಅದೇ ವೇಗ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಾ ಬಿಡದಿ ದಾಟಿದ್ದು ಗೊತ್ತಾಗಲೇ ಇಲ್ಲ. ಬಿಡದಿ ದಾಟುವ ಸಮಯದಲ್ಲಿ ಕತ್ತಲೆಯಲ್ಲಿ ಗೊತ್ತಾಗದೆ ರಸ್ತೆಯ ಅಂಚಿಗೆ ಹೋಗಿ ಬೀಳದೆ ಇದ್ದದ್ದು ನನ್ನ ಪುಣ್ಯ. ರಾಮನಗರದಲ್ಲಿ ಒಂದೊಂದು ತಟ್ಟೆ, ಇಡ್ಲಿ ವಡೆ ಒಳಗಿಳಿಸಿ ಹೊರಟಾಗ ರವಿ ಕಣ್ಣುಬಿಡುತ್ತಿದ್ದನಷ್ಟೆ. ದಿನದ ಕೆಲಸ ಕಾರ್ಯಗಳಿಗೆ ಹೊರಡುತ್ತಿದ್ದವರು, ವಿಚಿತ್ರ ವೇಷದಾರಿ ಸೈಕಲ್ ಸವಾರರ ಕಡೆಗೊಮ್ಮೆ ಕಣ್ಣು ಹಾಯಿಸಿ ತಮ್ಮ ತಮ್ಮ ದಾರಿಯಲ್ಲಿ ಹೋಗುತ್ತಿದ್ದರು. ಮನಸ್ಸಿನಲ್ಲಿ ಕೆಲಸವಿಲ್ಲದ ಶ್ರೀಮಂತರ ಮಕ್ಕಳ ವಿಚಿತ್ರ ಹುಚ್ಚು ಅಂದುಕೊಂಡಿರಬಹುದು ನನ್ನ ಅಣ್ಣನ ಹಾಗೆ. ಅಣ್ಣನ ಪ್ರಕಾರ ನಮ್ಮೀ ಹುಚ್ಚುಗಳಿಗೆ ಅರ್ಥವಿಲ್ಲ. ತಿಂದದ್ದು ಕರಗದಿದ್ದರೆ, ಬಂದು ತೋಟದಲ್ಲಿ ಕೆಲಸ ಮಾಡಿ, ನಮಗಿಲ್ಲಿ ಕಾಪಿ ಕುಯ್ಯಲಿಕ್ಕೆ ಜನ ಸಿಗದೆ ಒದ್ದಾಡುವಾಗ ಇವನದ್ದು ಸೈಕಲ್ ಹುಚ್ಚು ಎಂದು ಸಮಯ ಸಿಕ್ಕಾಗಲೆಲ್ಲ ಬೈದದ್ದುಂಟು.

ಮದ್ದೂರ್‍ನಲ್ಲಿ ತಿಂಡಿ ತಿನ್ನದೇ ಮುಂದೆ ಹೋಗುವುದುಂಟೆ? ರಾಮನಗರದಲ್ಲಿ ತಿಂದದ್ದು ಖಾಲಿಯಾಗಿತ್ತು, ಮಸಾಲ ದೋಸೆ ತಿನ್ನುತ್ತಿದ್ದಾಗ ಅನಿಲ್ ಕಡ್ಸೂರರ ಮೆಸ್ಸೇಜ್ ಬಂತು. ಎಲ್ಲಿ ತಲುಪಿದ್ರಿ? ಎಷ್ಟ್ ಹೊತ್ತಿಗೆ ಹೊರಟಿರಿ? ಸ್ಪೀಡ್ ಎಷ್ಟು? ೨೬ ಸರಾಸರಿ ವೇಗ ಕಾಯ್ದುಕೊಂದಿದ್ದರೂ, ಸ್ವಲ್ಪ ಹೊಟ್ಟೆ ಉರಿಸುವ ಎಂಬ ಮನಸಾಗಿ, ೩೬ ಸರಾಸರಿ ವೇಗದಲ್ಲಿ ಬಂದಿದ್ದೇವೆ, ಮಂಡ್ಯ ಮುಟ್ಟಿದೆವು ಎಂದು ರಿಪ್ಲ್ಯೆಯಿಸಿದೆ. ಅಬ್ಬ ಭಯಂಕರ ವೇಗ, ನನ್ನಿಂದ ಸಾಧ್ಯವಿಲ್ಲ ಎಂದು ಉತ್ತರಿಸಿದರು.

ಬೆಂಗ್ಳೂರಿನಿಂದ ಮಂಡ್ಯದ ವರೆಗೆ ಇಳಿಜಾರೇ ಜಾಸ್ತಿ. ಮಂಡ್ಯದಿಂದ ಶುರು ಅಪ್ಪು. ಕಾರಿನಲ್ಲಿ ಅಥವ, ಬಸ್ನಲ್ಲಿ ಗೊತ್ತಾಗದ ಅಪ್ಪು, ಸೈಕಲ್ನಲ್ಲಿ
ಗೊತ್ತಾಗುವುದು. ಇಲವಾಲ ತಿರುಗು ರಸ್ತೆ ತಲುಪಿ, ಮ್ಯೆಸೂರಿಗೆ ಹೊರಟಿದ್ದ ಭಾವ ಹಾಗು ಜಯಕ್ಕನನ್ನ ನೋಡಿ ಹೋಗುವ ಹಾಗು ೧೨೦ ಕಿಮೀ ತುಳಿದು ಸುಸ್ತಾದ ನಮಗೆ ವಿರಾಮವೂ ಆಯಿತೆಂದು ಸೈಕಲ್ನನ್ನು ರಸ್ತೆಯ ಬದಿಗೆಸೆದು ನಿರಾಳವಾದೆವು. ಅಲ್ಲೇ ಚಿಕ್ಕು ಹಣ್ಣು ಮಾರುತ್ತಿದ್ದವನಿಗೆ ಭರ್ಜರಿ ವ್ಯಾಪಾರವಾಯಿತು ನಮ್ಮಿಂದ. ಒಂದಾದ ಮೇಲೊಂದರಂತೆ ೧೨ ಹಣ್ಣು ಕಬಳಿಸಿದೆವು. ೧೫ ನಿಮಿಷ ಕಾದ ಮೇಲೆ ಬಂದ ಭಾವ, ಜಯಕ್ಕ ಹಾಗು ಮಕ್ಕಳ ಹತ್ತಿರ ಮಾತ್ನಾಡಿ, ಪಟ ಹಿಡಿಸಿಕೊಂಡು, ವಿದಾಯವನ್ನಿತ್ತು, ಇಲವಾಲದ ಮೂಲಕ ಮಡಿಕೇರಿಯ ದಾರಿಯನ್ನು ಹಿಡಿದೆವು.

ಈಗ ಕ್ರಮಿಸಿ ಬಂದ ಹಾದಿಗಿಂತ, ಸ್ವಲ್ಪ ಜಾಸ್ತಿ ಹಾದಿಯನ್ನು ಕ್ರಮಿಸಬೇಕಾಗಿತ್ತು, ಹಾಗೂ ಕ್ರಮಿಸಬೇಕಾದ ಹಾದಿ ಕಷ್ಟಕರವಾಗಿತ್ತು. ಎಷ್ಟು ತಿಂದರೂ ಸಾಕಾಗದಂತ ಹಸಿವು. ಯಾವುದಾದರೂ ಒಳ್ಳೆ ಹೋಟೆಲ್ ಕಂಡರೆ ಸ್ವಲ್ಪ ತುಂಬಿಸಿಯೇ ಹೋಗುವ ಮನಸಾಗಿ, ದಾರಿಯಲ್ಲಿ ಕಂಡ ಕಂಡ ಹೋಟೆಲ್ ಗೆ ನುಗ್ಗಿ ನೋಡಿದೆವು. ಅಂತೂ ಒಂದು ಹಳ್ಳಿ ಹೋಟೆಲ್ನಲ್ಲಿ ಸ್ವಲ್ಪ ರೈಸ್ ಬಾತ್ ಒಳಗಿಳಿಸಿ, ಇಲವಾಲದ ಹಾದಿಯಲ್ಲಿ ಸಿಗುವ ಅಸಂಖ್ಯಾತ ನೀರಿನ ತೊರೆಗಳಲ್ಲಿ ಒಂದರ ಹತ್ತಿರ ನಿಲ್ಲಿಸಿ, ಬಿಸಿಲಿನಲ್ಲಿ ಕಾದ ಹೆಂಚಿನ ಹಾಗಾಗಿದ್ದ ತಲೆಗೆ, ಕರಿದ ಹಪ್ಪಳದಂತಾಗಿದ್ದ ಮುಖಕ್ಕೆ ನೀರು ಸುರಿಸಿ ಹೊರಟೆವು.

ಹುಣಸೂರಿನಲ್ಲಿ ಊಟಕ್ಕೆ ನಿಲ್ಲಿಸಿ ಹೊರಗೆ ಬಂದಾಗ ನಮ್ಮ ಸೈಕಲ್ಗಳ ಸುತ್ತ ಜನ ಜಮೆಯಾಗಿದ್ದರು. ನಮ್ಮನ್ನ ಕಂಡದ್ದೇ, ಪ್ರಶ್ನೆಗಳ ಸುರಿಮಳೆ. ಅವರ ಕುತೂಹಲ ತಣಿಸಿ, ಬೆಂಗಳೂರಿನಿಂದ ಮಡಿಕೇರಿಗೆ ಒಂದೇ ದಿನದಲ್ಲಿ ಹೋಗುವಿರೇ!!!? ಎಂದು ದಿಗ್ಭ್ರಮೆಗೊಂಡವರಿಗೆ ಸೈಕಲ್ ಸವಾರಿಯ ಮಜದ ಬಗ್ಗೆ ವಿವರಿಸಿ ಮಡಿಕೇರಿಯ ಕಡೆಗೆ ತುಳಿಯತೊಡಗಿದೆವು. ಹುಣ್ಸೂರಿನಿಂದ ಪಿರಿಯಾಪಟ್ಟಣದ ವರೆಗೆ ಬರೀ ಏರು ದಾರಿಯೇ. ಹತ್ತುವುದು ೩ ಕಿಮೀ ಆದರೆ, ಇಳಿಯುವುದು ೧/೨ ಕಿಮೀ ಮಾತ್ರ. ಸೈಕಲ್ ತುಳಿದು ಅಭ್ಯಾಸವಿಲ್ಲದಾಗಿದ್ದ ನನಗೆ ಮಡಿಕೇರಿಯ ವರೆಗೆ ತುಳಿಯುವುದು ಕಷ್ಟ ಸಾಧ್ಯವಾಗಬಹುದೆಂದು ಅನ್ನಿಸತೊಡಗಿತು. ಆದರೆ ರಾಮ್ ಮಾತ್ರ ಇವತ್ತು ಇದನ್ನು ಸಾಧಿಸಿಯೇ ತೀರುವ ಹಠದಿಂದ ಮುಂದೆ ಮುಂದೆ ಹೋಗುತ್ತಿದ್ದ. ಪಿರಿಯಾಪಟ್ಟಣದಿಂದ ಕುಶಾಲನಗರದ ಒರೆಗೆ ಸುಲಭದ ದಾರಿ ಕಂಡು, ಒಮ್ಮೆ ಕುಶಾಲನಗರ ಮುಟ್ಟಿದ ನಂತರ ತೆವಳಿಕೊಂಡಾದರೂ ಮಡಿಕೇರಿ ಮುಟ್ಟಿಯೇ ಸಿದ್ದ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕುಶಾಲನಗರ ತಲುಪಲು ಇನ್ನೂ ಸ್ವಲ್ಪ ದೂರವಿದ್ದಾಗ ಮಳೆ ಶುರುವಾದದ್ದು ನೋಡಿ, ಸೈಕಲ್ನನ್ನು ಯಾವುದಾದರು ಲಾರಿ ಸಿಕ್ಕಿದರೆ ಅದರಲ್ಲಿ ಹಾಕಿ ಹೋದರೆ ಹೇಗೆ ಎಂದು ನಾನು ಹಾಗು ರಾಮ್ ಮಾತನಾಡಿಕೊಂಡೆವು. ಮಡಿಕೇರಿಯವರೆಗೆ ತುಳಿದೇ ಸಿದ್ದ ಎಂದು ೫ ನಿಮಿಷದ ಮೊದಲು ನಿರ್ಧರಿಸಿದ್ದ ನಾನು, ಮಳೆ ಜೋರಾಗಿ ಬರಲಿ ಎಂದು ರಾಮನಿಗೆ ಗೊತ್ತಾಗದ ಹಾಗೆ, ನಂಬಬೇಕೋ ಬೇಡವೋ ಎಂದು ಇನ್ನೂ
ಜಿಜ್ಞ್ಯಾಸೆಯಲ್ಲಿದ್ದ ದೇವರಲ್ಲಿ ಮೆಲ್ಲಗೆ ಪ್ರಾರ್ಥಿಸಿಲು ಶುರು ಮಾಡಿದೆನೋ ಇಲ್ಲವೋ, ಮಳೆ ನಿಂತಿತು. ಇನ್ನು ಹೊರಡುವ, ಲಾರಿಯೂ ಬೇಡ ಏನೂ ಬೇಡ ಎಂದು ಹೊರಟೇ ಬಿಟ್ಟ ರಾಮ್. ಥತ್ತೇರಿ… ದೇವರೂ ಬೇಡ, ಲಾರಿಯೂ ಬೇಡ ಎಂದು ನಾನು ರಾಮನನ್ನು ಹಿಂಬಾಲಿಸಲು ಶುರುವಿಟ್ಟೆ.

ಕುಶಾಲನಗರದಲ್ಲಿ ೧ ಕಾಪಿ ಕುಡಿಯಲೇಬೇಕೆಂದು ನನಗನ್ನಿಸಿದರೂ, ಆದಷ್ಟು ಬೇಗ ಮನೆ ತಲುಪಬೇಕೆಂಬ ತರಾತುರಿಯಲ್ಲಿದ್ದ, ರಾಮ್ ನಿಲ್ಲಿಸಲು ತಯಾರಿರಲಿಲ್ಲ. (ರಾಮನ ಮನೆ ಮಡಿಕೇರಿಗಿಂತ ೧೫ ಕಿಮೀ ಮೊದಲೇ ಸಿಗುವ ಶುಂಟಿಕೊಪ್ಪ) ಆದರೂ ಅವನನ್ನು ಹಿಡಿದು ನಿಲ್ಲಿಸಿ ಏನಾದರೂ ಕುಡಿಯುವುದು ಅನಿವಾರ್ಯವಾಗಿ, ಒಂದೊಂದು ಮಿರಿಂಡ ಶರಬತ್ತು ಕುಡಿದೆವು. ಕುಶಾಲನಗರದಿಂದ ಮಡಿಕೇರಿಯ ವರೆಗೆ ಪೂರ್ತಿ ಏರು ದಾರಿಯೇ.

ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿತ್ತು ನಮ್ಮ ಸವಾರಿ. ಹೊಸ ವರ್ಷ ಆಚರಿಸಲು ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಬಹಳವಿದ್ದ ಕಾರಣ, ವಾಹನಗಳ ದಟ್ಟಣಿ ಎಷ್ಟಿತ್ತೆಂದರೆ, ನಮಗೆ ಶುಂಟಿಕೊಪ್ಪದವರೆಗೆ ದಾರಿ ಬೆಳಕಿಗೆ ಏನೂ ತೊಂದರೆ ಇರಲಿಲ್ಲ. ನಾವು ಹೀಗೆ ಹೋಗುತ್ತಿದ್ದಾಗ, ಒಂದು ಕಾರಿನವರು ನಿಲ್ಲಿಸಿ, Guys, do you need anything? You are doing amazingly well ಎಂದು ಹುರಿದುಂಬಿಸುತ್ತ ಕಾರನ್ನು ನಿಲ್ಲಿಸಿದರು. ಕಾರಿನಲ್ಲಿದ್ದವರೊಬ್ಬರು ಮಾಜಿ ಸೈಕಲ್ ರೇಸರ್ ಅಂತೆ. ನಿತ್ತರೆ, ನಿತ್ತೇ ಬಿಡುವೆನೇನೊ ಎಂದು ಅಂಜಿದ ನಾನು No Thanks ಎಂದು ಮುಂದೆ ಹೋದರೆ, ರಾಮ್ ನಿಲ್ಲಿಸಿ ಅವರೊಡನೆ ಮತನಾಡಿ ಬಂದ.

ಶುಂಟಿಕೊಪ್ಪ ತಲುಪಿದಾಗ ಸರಿಯಾಗಿ ೭ ಗಂಟೆ. ಅಲ್ಲಿಂದ ಮಡಿಕೇರಿಗೆ ೧೫ ಕಿಮೀ ನಾನೊಬ್ಬನೇ ದಾರಿ ಸವೆಯಬೇಕಾಗಿತ್ತು. ಎಳನೀರು ಕುಡಿದು, ರಾಮನ ಟಾರ್ಚನ್ನು ನನ್ನ ಸೈಕಲ್ಗೆ ಕಟ್ಟಿ, ಟಾಟಾ ಹೇಳಿ ಹೊರಟೆ ಮಡಿಕೇರಿ ಕಡೆಗೆ. ಸುಂಟಿಕೊಪ್ಪ – ಮಡಿಕೇರಿ ದಾರಿಯಲ್ಲಿ ಸಿಗುವ ಒಂದೊಂದು ಘಾಟ್ ಕೂಡ ಬಲು ಘಾಟಿ. ಒಲಿಸಿಕೊಳ್ಳಬೇಕಾದರೆ ದೇಹದಲ್ಲಿನ ಕಟ್ಟ ಕಡೆಯ ಶಕ್ತಿಯನ್ನು ಬಳಸಬೇಕಾಗಿತ್ತು. ಸಂಪೂರ್ಣ ನಿಶ್ಯಕ್ತನಾಗಿದ್ದ ನಾನು, ಕೇವಲ ಛಲದಿಂದ ಮುಂದುವರಿದೆ. (ಈ ಛಲವನ್ನು, ನನ್ನ ಮಡದಿ, ಗುಡ್ಡೆಹಿತ್ತಲಿನವರ ಹುಚ್ಚು ಧೈರ್ಯ ಎಂದು ಹೀಗಳೆದದ್ದುಂಟು) ಬೋಯಿಕೇರಿ ತಲುಪುವಷ್ಟರಲ್ಲಿ , ಇನ್ನು ಸಾಧ್ಯವೇ ಇಲ್ಲ ಅನ್ನಿಸಿ, ಸೈಕಲ್ನಿಂದ ಇಳಿದು ನಡೆಯತೊಡಗಿದೆ. ಬಹಳ ಸಮಯದ ನಂತರ ಸೈಕಲ್ ಹತ್ತಿದ್ದರಿಂದ ಹಾಗೂ ಇಷ್ಟು ದೂರ ಪಯಣ ಕೈಗೊಂಡದ್ದರಿಂದ, ನನ್ನ ಆಸನದಲ್ಲಿ ಸಣ್ಣ ಸಣ್ಣ ಗುಳ್ಳೆಗಳಂತಾಗಿ, ಕೆಂಡದಲ್ಲಿ ಸುಟ್ಟ ಹಲಸಿನ ಹಪ್ಪಳದ ನೆನಪಾಯಿತು. ಕತ್ತಲೆಯಲ್ಲಿ ಟಾರ್ಚ್ ಬೆಳಕಿನ ಸಹಾಯದಿಂದ ಹೋಗುತ್ತಿದ್ದ ನನಗೆ, ಮನಸ್ಸಿನಲ್ಲಿ ಆಹಾ ಈಗ ಒಂದು ತಟ್ಟೆ ತುಂಬ ರಸಗುಲ್ಲವೋ, ಗುಲಾಬ್ ಜಾಮೂನೋ ಸಿಕ್ಕುವಂತಿದ್ದರೇ ಎಂದು ಬಾಯಿ ಚಪ್ಪರಿಸಿಕೊಂಡೆ. ಬೋಯಿಕೇರಿ ದಾಟಿದ ಮೇಲೆ ಪುನಹ ಸೈಕಲ್ ಏರಿದೆ. ಸಿಂಕೋನ ತಲುಪಿದಾಗ, ಸಣ್ಣವನಿದ್ದಾಗ, ಇಲ್ಲಿಗೆ ಚಿಕ್ಕಮ್ಮ ಹಾಗೂ ಅಪರ್ಣನೊಟ್ಟಿಗೆ ಬಂದು, ರಾಧಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ಉಪ್ಪಿಟ್ಟು ತಿಂದದ್ದು, ಕಂಬಳಿ ಹಣ್ಣು, ಲಿಚ್ಚಿ ಹಣ್ಣು ತಿಂದದ್ದು ನೆನಪಾಗುತ್ತಿತ್ತು.

ದಾರಿಯ ಮೇಲ್ಗಡೆ ಹಾದು ಹೋಗಿದ್ದ ಮರದ ಕೊಂಬೆಗಳನ್ನು ಕಂಡಾಗಲೆಲ್ಲ, ಮಡಿಕೇರಿಗೆ ಸ್ವಾಗತ ಕೋರುವ ಕಮಾನು ಕಂಡಂತಾಗುತ್ತಿತ್ತು. ಅಂತೂ ಕೊನೆಗೆ ನಿಜವಾದ ಕಮಾನು ಕಂಡಾಗ ಇಲ್ಲಿಯವರೆಗಿನ ಸುಸ್ತನ್ನೆಲ್ಲ ಮರೆತು ಮನೆ ಸೇರುವ ಆಸೆಯಿಂದ ಬೇಗ ಬೇಗನೆ ತುಳಿಯಲಾರಂಬಿಸಿದೆ.

ಮಡಿಕೇರಿಯಿಂದ ನನ್ನ ಮನೆಗೆ ೭ ಕಿಮೀ ತಾರು ರಸ್ತೆ ಹಾಗು ೩ ಕಿಮೀ ಪೂರ್ತಿ ಕಿತ್ತು ಹೋದ ಹಳ್ಳಿ ತಾರು ರಸ್ತೆ. ಆದರೆ ಒಂದೇ ಸಮಾಧಾನ ಅಂದರೆ ಪೂರ್ತಿ ಇಳಿಜಾರು. ಮನೆ ಬಾಗಿಲು ತಟ್ಟಿದಾಗ ಸರಿಯಾಗಿ ೯ ಹೊಡೆಯಿತು.

ಬೆಳಗ್ಗೆ ೪:೪೫ ಕ್ಕೆ ಹೊರಟ ನನ್ನ ಸವಾರಿ ಮನೆ ಮುಟ್ಟಲು ೧೬:೧೫ ನಿಮಿಷ ತೆಗೆದುಕೊಂಡಿತ್ತು. ಕ್ರಮಿಸಿದ ಹಾದಿ ೨೫೭.೪೦ ಕಿಮೀ.

Nandi Ride

ನಾನು ಏನನ್ನಾದರೂ ಬರೆಯಬೇಕು ಎನ್ನುವ ಆಸೆ ಬಹಳ ದಿನದಿಂದ ಇತ್ತು. ನೀವು ಏನನ್ನ ಬರೆದರೂ ಓದುವೆ ಅಂತ ಮಡದಿ ಭರವಸೆ ಕೊಟ್ಟಿದ್ಲು. ಅಂತೂ ನಾನು ಗೀಚಿದ್ದಕ್ಕೆ ೧ ಓದುಗ ಖಂಡಿತ. ಬೇರೆ ಯಾರು ಓದದಿದ್ದರೂ ಪರವಾಗಿಲ್ಲ ಅನ್ನುವ ಭರವಸೆಯಿಂದ ಬರೆಯಲು ಕುಳಿತೆ.

ಬರೆಯಬೇಕು ಅನ್ನುವ ತುಡಿತ ಒಳ್ಳೆಯದೆ, ಆದರೆ ಒಳ್ಳೆ ವಿಷಯ ಸಿಕ್ಕಬೇಕಲ್ಲ. ನಾನು ಬರೆಯಬೇಕು ಅಂದುಕೊಂಡ ವಿಷಯಗಳನ್ನ ಈಗಾಗಲೇ ಯಾರಾದರು ಬರೆದಿದ್ದಾರೆ ಅಥವ ಅವು ಎಂತಾ ತಲೆ ಕೆಟ್ಟ ವಿಷಯಗಳು ಅಂದ್ರೆ…..ಬಿಡಿ ಅದರ ಅಗತ್ಯ ಈಗ ಇಲ್ಲ. ನನಗೆ ವಿಷಯ ಸಿಕ್ಕಿದೆ.

 
೨ ದಿವಸ ಜ್ವರದಲ್ಲಿ ಮಲಗಿದ ಮೇಲೆ ನಂದಿ ಬೆಟ್ಟ ಸೈಕಲ್ನಲ್ಲಿ ಹತ್ತಿದ್ದು ಬರೆಯಬೇಕಾದ್ದೆ. ನಾನು ಹಾಗು ನನ್ನ ಭಾವ ಅರವಿಂದ ಸೋಮವಾರವೇ ನಂದಿ ಬೆಟ್ಟ ಹತ್ತುವುದೆಂದು ನಿರ್ಧರಿಸಿದ್ದೆವು. ಆದ್ದರಿಂದ ಶುಕ್ರವಾರ ಅರವಿಂದ ಕಾಲಿಸಿ, ನಾಳೆಗೆ ರೆಡಿ ತಾನೆ, ಅನಿಲ್ ಕಡ್ಸೂರ್ ಸಹ ನಮ್ಮ ಜೊತೆ ಬರಲು ರೆಡಿ ಆಗಿದ್ದಾರೆ ಅಂದಾಗ ಒಪ್ಪಲೇ ಬೇಕಾಯ್ತು. Bangalore Bikers Club ನಲ್ಲಿ ಪರಿಚಯ ಆದ ಅನಿಲ್ Cycling ನಲ್ಲಿ ೫ ವರುಷಗಳಿಂದ ಪಳಗಿದವರು. ನಮ್ಮ ಜೊತೆ ಅವರು ಬರುವುದು, ನಮ್ಮಂತ ಬಚ್ಛಗಳಿಗೆ Cycling ನಲ್ಲಿ ಒಂದು ಒಳ್ಳೆಯ ಪಾಟ. ಶುಕ್ರವಾರ ಪೋನಿಸಿದ ಅರವಿಂದ, ಬೆಳಗ್ಗೆ ೫:೩೦ ಗಂಟೆಗೆ ಹೊರಡುವ ಎಂದ. ಆದರೆ ಅನಿಲ್ ಪ್ರಕಾರ ೫:೩೦ ಬಹಳ ತಡ ಆಯ್ತು, ಬರುವಾಗ ಬಿಸಿಲು, ಹಾಗಾಗಿ ೪:೩೦ ಗೆ Common point ನಲ್ಲಿ ಭೇಟಿಯಾಗಿ ಮುಂದುವರಿಸುವ ಅಂದಾಗ ನಾವು ಒಪ್ಪಲೇಬೇಕಾಯಿತು. Jain College ನ ಮುಂದೆ ೪:೩೦ ಕ್ಕೆ ಭೇಟ್ಟಿಯಾಗಿ ನಮ್ಮ ಮುಂದಿನ ಗುರಿಯ ಕಡೆಗೆ pedal ತುಳಿಯತೊಡಗಿದೆವು.

 

ನನ್ನ ಹಾಗು ಅನಿಲ್ ಅವರ ಮೊದಲ ಭೇಟಿ ಇದಾಗಿತ್ತು. ಅದ್ಭುತ ಮಾತುಗಾರ ಕೊಡ ಆದ ಅನಿಲ್ ಅವರ ಹತ್ತಿರ ಮಾತಾಡುತ್ತಾ ಆಡುತ್ತಾ ಮೇಖ್ರಿ circle ಬಂದದ್ದೇ ಗೊತ್ತಾಗಲಿಲ್ಲ. ಮುಂಜಾನೆಯ ಬೆಂಗಳೂರಿನ ಚುಮು ಚುಮು ಚಳಿ ೪ ಸಲ ಪೆಡಲ್ ಉರುಳಿದ ಕೂಡಲೇ ಮಾಯವಾಗಿ ಹಿತವಾದ ಅನುಭವದ ನಡುವೆ ಲೋಕಾಭಿರಾಮವಾಗಿ ನಾನು ಅನಿಲ್ ಮಾತಾಡುತ್ತಾ ೨೦ ಕಿ ಮೀ ವೇಗದಲ್ಲಿ ನಮ್ಮ Energy conserve ಮಾಡುತ್ತಾ ದಾರಿ ಕ್ರಮಿಸಲು ಮುಂದಾದರೆ, ಅರವಿಂದ ಕಾಲಿ ರೋಡ್ ಸಿಕ್ಕಿದ್ದೇ ಚಾನ್ಸು ಅಂತ ಬಿಟ್ಟ ಬಾಣದ ಹಾಗೆ ನಂದಿಯ ಕಡೆಗೆ ದೌಢಾಯಿಸತೊಡಗಿದ.

ನಮ್ಮಿಬ್ಬರನ್ನ ಹಿಂದೆ ಬಿಟ್ಟ ಅರವಿಂದ ಇನ್ನು ನಂದಿಯ ಬುಡದಲ್ಲೇ ಸಿಕ್ಕಿಯಾನೇನೊ ಅಂತ ನಾವು ಅಂದುಕೊಂಡರೆ, ಹಾಗಾಗದೆ ೩೦+ ಕಿ ಮೀ ವೇಗದಲ್ಲಿ ಹೋಗುತ್ತಿದ್ದಾಗ cycle chain ಕಿತ್ತು ಬಂದು cycle ತನ್ನ ಸಮೇತ ತನ್ನ ಸವಾರನನ್ನೂ ರಸ್ತೆಯ ಬದಿಗೆ ಹೊತ್ತು ಹಾಕಿತ್ತು. ೨೦,೦೦೦ ದ cycle ಹಳೇ ಅಟ್ಲಾಸ್ cycle ನ ಹಾಗಲ್ಲ. ೨ ನಿಮಿಷದಲ್ಲಿ chain ಸಿಕ್ಕಿಸಿ ಅರವಿಂದ ಪುನಃ ದೌಢಾಯಿಸತೊಡಗಿದ. ನಮ್ಮ ಮೊದಲನೆ stop airport ಕಳೆದು, ದೇವನಹಳ್ಳಿಗಿಂತ ಸ್ವಲ್ಪ ಮೊದಲು ಸಿಗುವ ರಸ್ತೆ ಬದಿಯ ಚಾಯ್ ವಾಲನ ಮುಂದಾಯ್ತು. ೫೦ ಕಿ ಮೀ ಕ್ರಮಿಸಿದ್ದೆವು. ಸುಸ್ತಿನ ಸುದ್ದಿಯೇ ಇರಲಿಲ್ಲ. ಇನ್ನೂ ಕ್ರಮಿಸಬೇಕಾದ ದಾರಿ ಬಹಳ ಇರಬೇಕಾದರೆ ಸುಸ್ತಿಗೆಲ್ಲಿ ಸ್ಥಾನ? ಒಂದೊಂದು ಚಾಯ್ ಕುಡಿದು, ಅನಿಲ್ ತಂದ ಶಕ್ತಿ ವರ್ಧಕ ಬಾಳೆ ಹಣ್ಣು ತಿಂದು, ಮಳೆ ಇಲ್ಲದೇ ಸೊರಗಿದ ರಸ್ತೆ ಬದಿಯ ಪಾರ್ತೇನಿಯಮ್ ಗಿಡಗಳಿಗೆ ನೀರ್ಬಿಟ್ಟು ಮುಂದಿನ ನಿಲ್ದಾಣವಾದ ನಂದಿಯ ಬುಡದ hotel ನ ಕಡೆಗೆ ಪೆಡಲಿಸಲು ಶುರುವಿಟ್ಟೆವು.

Highway ದಾಟಿ, ನಂದಿ ರಸ್ತೆ ಯ ಕಡೆಗೆ ತಿರುಗಿದೆವು. ಅರವಿಂದ ನಮ್ಮಿಬ್ಬರನ್ನ ಹಿಂದೆ ಬಿಟ್ಟು ಮುಂದೆ ಹೋಗಿ ಕಾಣದಾದ. ನಾವಿಬ್ಬರು ಸರಾಸರಿ ೨೨, ೨೪ ವೇಗದಲ್ಲಿ ಮುಂದುವರೆಯತೊಡಗಿದೆವು. ಶನಿವಾರ ಬೆಳಗ್ಗೆ ನಂದಿಗೆ ಬೈಕ್ ಸವಾರರು ಬಹಳವಿದ್ದರು. ಇವರನ್ನು ಅನಿಲ್, bike ನಲ್ಲಿ ಹೋಗೋದ್ರಲ್ಲಿ ಏನಿದೆ ಸಾಹಸ? ತಾಕತ್ತಿದ್ರೆ ಸೈಕಲ್ನಲ್ಲಿ ಹೋಗ್ಲಿ. ಸುಮ್ನೆ ದುಡ್ಡು ದಂಡ ಮಾಡಿ pollution ಮಾಡ್ತಾರೆ ಅಂದಾಗ; ನಾನು ಮೊದಲು bike ನಲ್ಲಿ ಹೋಗುತ್ತಿದ್ದದ್ದನ್ನು ಮರೆತು,ಅಹುದಹುದೆನ್ನಬೇಕಾಯಿತು. ೨ ದಿವಸ ಕಾಡಿದ ಶೀತ ಜ್ವರದಿಂದ ಬಳಲಿದ್ದ ನನಗೆ ಸುಸ್ತಾಗಲು ಶುರುವಾಯಿತು, ಅದರೊಟ್ಟಿಗೆ ಹಸಿವು ಬೇರೆ. ಕಣ್ಣಿನ ಮುಂದೆ ಬಿಸಿ ಬಿಸಿ ಇಡ್ಲಿ ವಡೆ ಸಾಂಬಾರ್ ಚಿತ್ರಣವಿಟ್ಟುಕೊಂಡು ಒಂದೇ ಗುರಿಯಿಂದ ಒದೆಯಲು ಶುರು ಮಾಡಿದೆ. ನನಗೆ ಸುಸ್ತಾಗುತ್ತಿದೆ ಅಂತ ಇವರಿಬ್ಬರಿಗೆ ಗೊತ್ತಾದರೆ, ನನಗೆ ಮಾತ್ರ ಅಲ್ಲ, ಗುಡ್ಡೆಹಿತ್ತಲಿನ ವೀರತ್ವಕ್ಕೆ ಅವಮಾನ ಅಲ್ಲವೇ?

ಅಂತೂ ಇಂತೂ ನಂದಿಯ ಬುಡದ ಹೋಟೆಲ್ ಮುಟ್ಟಿ ತಲಾ ೨ ಇಡ್ಲಿ, ೨ ವಡೆ, ೩ ಬಾಳೆ ಹಣ್ಣು ಹೊಟ್ಟೆಗಿಳಿಸಿದ ಮೇಲೆ ನಂದಿ ಹತ್ತುವ ವಿಶ್ವಾಸ ಬಂತು. ಇಲ್ಲಿಯವರೆಗ ನಾವು ೬೨ ಕಿ ಮೀ ೩ ಗಂಟೆಯಲ್ಲಿ ಕ್ರಮಿಸಿದ್ದೆವು. ಇನ್ನು ಮುಂದೆ ಇದ್ದದ್ದು ೮ ಕಿ ಮೀ ಹತ್ತುವಿಕೆ ಒಂದೇ ಕಷ್ಟದ ಸವಾಲು ಅಂತ ನಾವು ಅಂದುಕೊಂಡದ್ದು ತಪ್ಪು ಅಂತ ನಮಗೆ ಮುಂದೆ ಅರ್ಥವಾಗಲಿತ್ತು.

ನಂದಿ ಹತ್ತಲು ಶುರುವಿಟ್ಟಕೂಡಲೆ, ಇಲ್ಲಿಯವರೆಗೆ ಹಿಂದೆ ಹಿಂದೆ ಬರುತ್ತಿದ್ದ ಅನಿಲ್ ಚುರುಕಾದರು. ಮುಂದೆ ಅವರು, ಅವರ ಹಿಂದೆ ನಾನು, ನನ್ನ ಹಿಂದೆ ಇಲ್ಲಿಯವರೆಗಿನ ಲೀಡರ್ ಅರವಿಂದ. ೨ ತಿರುವುಗಳ ವರೆಗೆ ನನ್ನ ಕಣ್ಣಳತೆಯಲ್ಲೇ ಇದ್ದ ಅನಿಲ್ ೩ನೇ ತಿರುವಿನಲ್ಲಿ ಮಾಯವಾದರು. ಇನ್ನು ಅವರ ಭೇಟಿ ಮೇಲೆ ಹತ್ತಿದ ಮೇಲೆಯೇ ಎಂಬುದು ಮನವರಿಕೆಯಾಗಿ, ಪೆಡಲ್ ಮೇಲಿನ ಒತ್ತಡ ಕಡಿಮೆ ಮಾಡಿ ಆರಾಮ್ ಅನಿಸುವ ವೇಗ ಕಾಯ್ದುಕೊಳ್ಳುವ ಕಡೆಗೆ ಗಮನ ಹರಿಸಿದೆ. ಕೊನೆಯ ೩ ಕಿ ಮೀ ಕಡಿದಾಗಿದ್ದ ಕಾರಣ, ಶಕ್ತಿ ಉಳಿಸಿಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಕೊನೆಯ over ಗಳಿಗೆ Power play ಉಳಿಸಿಕೊಳ್ಳುತ್ತಾರಲ್ಲ ಹಾಗೆ.

ಅನಿಲ್ ಮುಂದೆ ಮಾಯವಾಗಿದ್ದರು, ಅರವಿಂದ ಹಿಂದೆ ಮಾಯವಾಗಿದ್ದ. ನಾನೊಬ್ಬನೇ ಒಂದೊಂದು ಕಿ ಮೀ, ಕ್ಷಮಿಸಿ, ಒಂದೊಂದು ಮೀಟರು ಸಹ ಅನುಭವಿಸಿ ಮುಂದುವರಿಯಬೇಕಿತ್ತು. ದಟ್ಟ ಮಂಜು ಮುಂದಿನ ದಾರಿ ಕಾಣದ ಹಾಗೆ ಮುಸುಕಿದ್ದು ಒಳ್ಳೆಯದೇ ಆಯಿತು. ಮುಂದಿನ ಕಡಿದಾದ ಮಾರ್ಗ ಕಂಡರೆ ಅಲ್ಲವೆ ಕಷ್ಟ. ಕೊನೆಯ ತಿರುವಂತು ಅತ್ಯಂತ ಕಡಿದಾಗಿದ್ದು, ಇಲ್ಲಿಯ ವರೆಗೆ ಕೂಡಿಟ್ಟ ಅಲ್ಪ ಸ್ವಲ್ಪ ಶಕ್ತಿಯನ್ನೆಲ್ಲ ಬಳಸಿ ತುಳಿಯಬೇಕಾಯ್ತು. (ಅರವಿಂದನ ಸೈಕಲ್ ಮುಂದಿನ ಚಕ್ರ ಎತ್ತಿ ನಿಂತಿತಂತೆ ಈ ತಿರುವಿನಲ್ಲಿ. ಅವನು ಪೂರ್ತಿ ಬಲ ಸೇರಿಸಿ Handle bar ಎಳೆದಿದ್ದರಿಂದ). ಕೊನೆಯ ತಿರುವು ಕಳೆದ ಕೂಡಲೆ ಎದುರಿಗಿದೆ ನಂದಿ ಬೆಟ್ಟದ ಕಮಾನು. ಕಮಾ……ನ್ ಕಮಾ…….ನ್ ಅಂತ ಬೊಬ್ಬಿಟ್ಟುಕೊಂಡು ಆ ಕಮಾನು ದಾಟಿದ ಹಾಗೆ ಏನೊ ಒಂದು ಮಹಾನ್ ಸಾಧನೆ ಮಾಡಿದ ಅನುಭವ. ಆ ಅನುಭವ ವರ್ಣಿಸಲಸದಳವು. ಅದನ್ನ ಅನುಭವಿಸಿಯೇ ತೀರಬೆಕು.

ನನಗಿಂತ ೬ ನಿಮಿಷ ಮೊದಲೇ ತಲುಪಿದ್ದ ಅನಿಲ್ ನಮ್ಮ ಸಾಧನೆಯನ್ನ ಕೈ ಕುಲುಕಿ ಶ್ಲಾಘಿಸಿದರು. ನಾನು ತಲುಪಿ ಮತ್ತೆ ೧೦ ನಿಮಿಷದ ಮೇಲೆ ಅರವಿಂದನೂ ಮೇಲೆ ಬಂದ. ಸದಾ ಹಸನ್ಮುಖಿ ಅರವಿಂದನ ಮುಖಾರವಿಂದದ ಮೇಲೆ ಅಳಿಸಲಾಗದ ನಗು, ನೋವಿನ ನಡುವೆಯೂ ಸ್ಥಾಪನೆಯಾಗಿತ್ತು. ಮೇಲೆ ನೋಡಿದರೆ ನಮಗಿಂತ ಮೊದಲೇ ಮೇಲೆ ಬಂದ ಇನ್ನಿಬ್ಬರು ಸೈಕಲ್ ಸವಾರರು ಸುಧಾರಿಸಿಕೊಳ್ಳುತ್ತಿದ್ದರು. ಅವರು ಬಿಡಿ, ನಂದಿ ಬುಡದ ವರೆಗೆ ಕಾರಿನಲ್ಲಿ ಬಂದು, ಕೇವಲ ೮ ಕಿ ಮೀ ಮಾತ್ರ ಸೈಕಲ್ ತುಳಿದವರು. ಅವರಿಗೂ ೪೦ ನಿಮಿಷ ಬೇಕಾಯ್ತಂತೆ. ನಮ್ಮಲ್ಲಿ ಅರುಣ್ ೪೧ ನಿಮಿಷ, ನಾನು ೪೭ ನಿಮಿಷ, ಅರವಿಂದ ೫೮ ನಿಮಿಷದಲ್ಲಿ ಮೇಲೆ ಮುಟ್ಟಿದ್ದೆವು. ಹೇಳಿಕೊಳ್ಳುವಂತಹ ಸಾಧನೆ ಅಲ್ಲದಿದ್ದರೂ, ಇದು ಮೂವರಿಗೂ ಮೊದಲ ನಂದಿ ಸೈಕಲ್ ಚಾರಣವಾಗಿತ್ತು.

ತಿರು ಪ್ರಯಾಣ

ನಂದಿಯನ್ನು ಹತ್ತುವುದು ಎಷ್ಟು ಕಷ್ಟವೋ ಇಳಿಯುವುದು ಅಷ್ಟೇ ಸುಲಭ ಹಾಗು ಚೇತೋಹಾರಿ. ಅರವಿಂದ ಮಿಂಚಿನ ವೇಗದಲ್ಲಿ ಕೆಳಗಿಳಿದರೆ, ಅವನ ಹಿಂದೆ ಅನಿಲ್, ಅವರ ಹಿಂದೆ ನಾನು. ೫ ನಿಮಿಷದಲ್ಲಿ ಇಳಿದಾಗಿತ್ತು. ನಂದಿ ಇಳಿದದ್ದೊಂದೇ ಸುಲಭವಾದದ್ದು. ಏರ್ ಪೋರ್ಟ್ ದಾರಿಯಲ್ಲಿ ಎದುರಿನಿಂದ ಬೀಸುತ್ತಿದ್ದ ಬಿರುಸಾದ ಗಾಳಿಗೆ ಎದುರಾಗಿ ಸೈಕಲ್ ತುಳಿಯಲು ನಾವು ಬಹಳವೇ ತ್ರಾಸ ಪಡಬೇಕಾಯ್ತು. ನ ರಾ ಕಾಲೊನಿ ಹಟ್ಟಿ ಕಾಪಿ ಯಲ್ಲಿ ಕಾಫಿ ಹೀರಿ ಅರವಿಂದನಿಗೆ ವಿದಾಯ ಹೇಳಿ ನಾನು ಅನಿಲ್ ಗಿರಿನಗರದ ಹಾದಿ ತುಳಿದೆವು.

ಅಂತೂ ಇಂತೂ ಇದ್ದ ಬದ್ದ ಶಕ್ತಿಯನ್ನೆಲ್ಲಾ ವ್ಯಯಿಸಿ ಮನೆ ಮುಟ್ಟಿದಾಗ ೧:೩೦ ಗಂಟೆ. ನನ್ನ ದಾರಿ ಕಾಯ್ದು, ಕಾಯ್ದು, ನಾನ್ ಫೋನ್ ಎತ್ತದೇ ಇದ್ದುದರಿಂದ ಇನ್ನಶ್ಟು ಕಾದು, ಕೋಪದಿಂದ ಕುಂಬಳಕಾಯಿಯಾಗಿದ್ದ ಮಡದಿಯ ಮುಖ ಮಾವಿನ ಹಣ್ಣಾಗಲು ಸಂಜೆಯವರೆಗೆ ಕಾಯಬೇಕಾಯಿತು.

Total distance cycled 142 km.

This slideshow requires JavaScript.